ತಕ್ಷಶಿಲೆ
ಪ್ರಾಚೀನ ಗಾಂಧಾರ ದೇಶದ ರಾಜಧಾನಿ; ಭಾರತದ ಪ್ರಾಚೀನತಮ ಉನ್ನತ ವಿದ್ಯಾಕೇಂದ್ರ; ಈಗ ಪಾಕಿಸ್ತಾನದ ರಾವಲ್‍ಪಿಂಡಿ ಜಿಲ್ಲೆಯಲ್ಲಿದೆ. ಈ ನಗರವನ್ನು ಭರತ ಸ್ಥಾಪಿಸಿದನೆಂದೂ ಅದಕ್ಕೆ ಈ ಹೆಸರು ತಕ್ಷನಿಂದ ಬಂತೆಂದೂ ಪುರಾಣಗಳಲ್ಲಿ ಉಲ್ಲೇಖಗಳುಂಟು. ಜನಮೇಜಯರಾಯ ಸರ್ಪಯಾಗವನ್ನು ಆಚರಿಸಿದ್ದು ಇಲ್ಲೇ ಎನ್ನಲಾಗಿದೆ. ರಾಮಾಯಣವಾಗಲೀ ಭಾರತವಾಗಲಿ ಅದೊಂದು ವಿದ್ಯಾಕೇಂದ್ರಾವಾಗಿತ್ತೆಂಬ ಅಂಶವನ್ನು ಉಲ್ಲೇಖಿಸದಿದ್ದರೂ ಸಂಸ್ಕøತಿ ನಾಗರಿಕತೆಗಳ ಕೇಂದ್ರವಾಗಿತ್ತೆಂಬ ಅಂಶವನ್ನು ವ್ಯಕ್ತಪಡಿಸುತ್ತವೆ. e್ಞÁನಾಭಿಮಾನಿಗಳಿದ್ದ ಆ ನಗರ ಅಂದಿಗಾಗಲೆ ಉನ್ನತ ಶಿಕ್ಷಣ ಕೇಂದ್ರವೂ ಆಗಿದ್ದಿರಬೇಕೆಂದು ಊಹಿಸಬಹುದು. ಕ್ರಿ.. ಪೂ. ಏಳನೆಯ ಶತಮಾನದ ವೇಳೆಗಂತೂ ಅದು ಪ್ರಮುಖ ಉನ್ನತ ಶಿಕ್ಷಣ ಕೇಂದ್ರವಾಗಿ ಖ್ಯಾತಿಗಳಿಸಿತ್ತು. ಮಿಥಿಲೆ, ವಾರಣಾಸಿ, ರಾಜಗೃಹ ಮುಂತಾದೆಡೆಗಳಿಂದ ವಿದ್ವಜ್ಜನ ಬಂದು ಅಲ್ಲಿ ನೆಲೆಸಿದ್ದರು. ಅಲೆಕ್ಸಾಂಡರನ ಕಾಲಕ್ಕೆ ಅಲ್ಲಿನ ತತ್ತ್ವಚಿಂತಕರು ದಿಗಂತ ಖ್ಯಾತಿಗಳಿಸಿದ್ದರು. ಆದರೂ ಅಲ್ಲಿದ್ದ ಶಿಕ್ಷಣ ಸೌಲಭ್ಯಗಳನ್ನು ಪರಿಚಯ ಮಾಡಿಕೊಡುವ ಆಧಾರಗಳು ದೊರೆತಿಲ್ಲ. ಕ್ರಿ.ಪೂ. 6ನೆಯ ಶತಮಾನದಲ್ಲಿ ಆ ನಗರ ಪಾರಸಿಕರ ದಾಳಿಗೂ ಕ್ರಿ. ಪೂ. ಏಳನೆಯ ಶತಮಾನದಲ್ಲಿ ಇಂಡೋಬ್ಯಾಕ್ಟ್ರಿಯನ್ನರ ದಾಳಿಗೂ ಅನಂತರ ಕ್ರಿ. ಪೂ. ಒಂದನೆಯ ಶತಮಾನದಲ್ಲಿ ಸಿತಿಯನ್ನರ ದಾಳಿಗೂ ಕೊನೆಗೆ ಕ್ರಿ. ಶ. ಒಂದನೆಯ ಶತಮಾನದಲ್ಲಿ ಕುಶಾನರ ದಾಳಿಗೂ ಸಿಕ್ಕಿತ್ತು. ಆ ಎಲ್ಲ ದಾಳಿಕಾರರೂ ಈ ನಗರವನ್ನೇ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ತಮ್ಮ ತಮ್ಮ ಕಾಲದಲ್ಲಿ ತಮ್ಮ ದೇಶದ ಮಾದರಿಯಲ್ಲೆ ಇದನ್ನು ಮಾರ್ಪಡಿಸಲು ಯತ್ನಿಸಿರಬೇಕು. ನಗರ ಮೂರು ಬೇರೆ ಬೇರೆ ಪ್ರದೇಶಗಳಲ್ಲಿ ಹರಡಿದ್ದುದನ್ನು ಅಲ್ಲಿನ ಭೂಶೋಧನೆ ತೋರಿಸಿದೆ. (ವಿವರಗಳು ಈ ಲೇಖನದ ಕೊನೆಯ ಭಾಗದಲ್ಲಿದೆ.) ಪರಕೀಯರ ಸತತ ಸಂಪರ್ಕ ಈ ನಗರಕ್ಕೆ ಉಂಟಾದ್ದರಿಂದ ಅಲ್ಲಿನ ವ್ಯವಹಾರಗಳಿಗೆ ಅಗತ್ಯವೆನಿಸಿರಬಹುದಾದ ಉನ್ನತ ಶಿಕ್ಷಣಕ್ಕೂ ವಿದ್ವತ್ತಿಗೂ ಅವಕಾಶವೂ ಪ್ರೋತ್ಸಾಹವೂ ಒದಗಿರಬೇಕು. ಪಾರಸಿಕರ ಪ್ರಭಾವದಿಂದ ಭಾರತದ ರಾಷ್ಟ್ರೀಯ ಲಿಪಿಯ ಸ್ಥಾನದಲ್ಲಿ ಪರ್ಷಿಯಾದ ಆಸ್ಥಾನದ ಲಿಪಿಯಾಗಿದ್ದ ಖರೋಷ್ಠಿ ಬಳಕೆಗೆ ಬಂದಿರಬೇಕು. ಇಂಡೋ-ಬ್ಯಾಕ್ಟ್ರಿಯನ್ನರು ಗ್ರೀಸಿನಲ್ಲಿ ಅಂದಿಗಾಗಲೇ ಪ್ರಬುದ್ಧ ಸ್ಥಿತಿಗೇರಿದ್ದ ಸಾಹಿತ್ಯ ಸಂಸ್ಕøತಿಗಳನ್ನು ಇಲ್ಲಿಗೆ ತಂದಿರಬೇಕು. ತಕ್ಷಶಿಲೆಯ ಪಂಡಿತರನೇಕರು ಗ್ರೀಕ್ ಭಾಷೆಯನ್ನು ಅಧ್ಯಯನಮಾಡಿ ಅಲ್ಲಿ ನೆಲೆಗೊಳ್ಳುತ್ತಿದ್ದ ಗ್ರೀಕ್ ಮಾದರಿಯ ಆಡಳಿತ ವ್ಯವಸ್ಥೆಗೆ ಅಗತ್ಯವಾದ ಸಿಬ್ಬಂದಿಯ ತರಬೇತಿಗಾಗಿ ನೆರವಾಗುತ್ತಿದ್ದಿರಬೇಕು. ಗ್ರೀಸಿನಲ್ಲಿ ಅಂದು ಅಭಿನಯಿಸುತ್ತಿದ್ದ ಸಾಫೋಕ್ಲಿಸ್ ಯೂರಿಪಿಡೀಸ್ ಮುಂತಾದವರ ನಾಟಕ ಕೃತಿಗಳನ್ನೂ ಓದಿರಬೇಕು. ಇಲ್ಲಿ ವಾಸಿಸುತ್ತಿದ್ದ ಗ್ರೀಕರು ತಮ್ಮ ನಾಡಿನೊಡನೆ ಸಂಪರ್ಕ ಕಳೆದುಕೊಂಡಂತೆ ಇಲ್ಲಿನವರ ಜೀವನದಲ್ಲಿ ಆಸಕ್ತಿವಹಿಸಿ ಸ್ಥಳೀಯ ಸಂಸ್ಕøತಿಯನ್ನು ಅನುಕರಿಸಲಾರಂಭಿಸಿದರೆಂದು ತೋರುತ್ತದೆ. ಅವರ ಉಪಯೋಗಕ್ಕಾಗಿ ಭಾರತೀಯ ಜನಜೀವನ, ಧರ್ಮ, ಸಂಸ್ಕøತಿಗಳಿಗೆ ಸಂಬಂಧಿಸಿದ್ದ ವಸ್ತುಗಳನ್ನಾರಿಸಿಕೊಂಡು ಗ್ರೀಕ್ ಮಾದರಿಯ ನಾಟಕಗಳನ್ನು ರಚಿಸಲು ಅಶ್ವಘೋಷನಂಥ ನಾಟಕಕಾರರು ಯತ್ನಿಸಿದ್ದಿರಬೇಕು. ಇವೆಲ್ಲದರ ಫಲವಾಗಿ ಇಲ್ಲಿನ ವಿದ್ವಜ್ಜನರ ಮೇಲೆ ಗ್ರೀಕ್ ಪ್ರಭಾವ ನಿರ್ದಿಷ್ಟವಾಗಿ ಬಿದ್ಧಿತ್ತೆನ್ನಬಹುದು. ಆದರೂ ಇಲ್ಲಿನ ವಿದ್ಯಾಕೇಂದ್ರಗಳನ್ನು ವ್ಯವಸ್ಥೆಗೊಳಿಸಲು ಅದು ಎಷ್ಟರಮಟ್ಟಿಗೆ ಸಹಾಯ ಮಾಡಿರಬಹುದೆಂಬ ಅಂಶ ಇನ್ನೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿದೆ.

ತಕ್ಷಶಿಲೆ ಭಾರತದ ಪ್ರಾಚೀನತಮ ವಿಶ್ವವಿದ್ಯಾನಿಲಯದಂತಿತ್ತೆಂದು ಪರಿಗಣಿಸುವುದು ರೂಢಿಯಲ್ಲಿದ್ದರೂ ಅದು ಆಧುನಿಕ ವಿಶ್ವವಿದ್ಯಾನಿಲಯದಂತಿತ್ತೆಂದು ಹೇಳುವುದು ಉಚಿತವೆನಿಸದು. ಅಲ್ಲಿ ಅನೇಕ ತತ್ತ್ವಚಿಂತಕರೂ ವಿದ್ವಜ್ಜನರೂ ಪಂಡಿತರೂ ಇದ್ದರು. ಒಬೊಬ್ಬರೂ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣವೀಯುತ್ತಿದ್ದರು. ಆದರೆ ಅವರು ಒಂದು ನಿರ್ದಿಷ್ಟ ಸಂಸ್ಥೆಗೆ ಸೇರಿದ್ದು ಅದರ ನಿರ್ದೇಶದಂತೆ ಭೋಧಿಸುತ್ತಿರಲಿಲ್ಲ; ರೂಪಿಸಿದ ಯಾವ ಪಠ್ಯಕ್ರಮವನ್ನೂ ಅವರು ಅನುಸರಿಸುತ್ತಿರಲಿಲ್ಲ. ಒಬ್ಬೊಬ್ಬರೂ ಪ್ರತ್ಯೇಕವಾಗಿದ್ದುಕೊಂಡು ತಮಗಿಷ್ಟ ಬಂದ ವಿದ್ಯಾರ್ಥಿಗಳನ್ನು ಇಷ್ಟಬಂದ ಸಂಖ್ಯೆಯಲ್ಲಿ ಸೇರಿಸಿಕೊಂಡು ಆಯಾ ವಿದ್ಯಾರ್ಥಿಗೆ ಆಸಕ್ತಿಯುಳ್ಳ ಕ್ಷೇತ್ರದಲ್ಲಿ ಬೋಧಿಸುತ್ತಿದ್ದರು. ಪರೀಕ್ಷೆಗಳಾಗಲೀ ಪದವೀದಾನ ಮಾಡುವ ವ್ಯವಸ್ಥೆಯಾಗಲೀ ಆಗ ಇದ್ದಿರಲಿಲ್ಲ. ಪ್ರತಿಯೊಬ್ಬ ಗುರುಗಳ ಬಳಿಯಲ್ಲೂ 500 ಮಂದಿ ವಿದ್ಯಾರ್ಥಿಗಳಿರುತ್ತಿದ್ದರೆಂದು ಕೆಲವು ಜಾತಕಗಳು ಹೇಳುತ್ತವೆ. ಖ್ಯಾತಗುರುಗಳ ಬಳಿ 103 ರಾಜಕುಮಾರರು ಅಧ್ಯಯನ ನಡೆಸುತ್ತಿದ್ದುದಾಗಿ ಮಹಾಸೂತ ಸೋಮ ಜಾತಕದಲ್ಲಿ ಸೂಚಿಸಿದೆ. ಆದರೆ ಸಾಮಾನ್ಯವಾಗಿ ಒಬ್ಬೊಬ್ಬರಲ್ಲೂ 20 ಮಂದಿ ವಿದ್ಯಾರ್ಥಿಗಳಾದರೂ ಇರುತ್ತಿದ್ದರೆಂದು ಭಾವಿಸಬಹುದು. ತಕ್ಷಶಿಲೆಯ ಬಳಿ ಈಚೆಗೆ ನಡೆಸಿರುವ ಭೂಶೋಧನೆ ಅಲ್ಲಿ ವಿಶಾಲಮಂದಿರಗಳಾಗಲಿ ಛಾತ್ರಾಲಯಗಳಾಗಲಿ ಇದ್ದ ಕುರುಹನ್ನು ಸೂಚಿಸಿಲ್ಲ. ಬಹುಶಃ ವಿದ್ಯಾರ್ಥಿಗಳು ತಮ್ಮ ತಮ್ಮ ಗುರುಗಳ ಮನೆಯಲ್ಲೇ ವಾಸಿಸುತ್ತಿದ್ದಿರಬೇಕು. ಶ್ರೀಮಂತ ವಿದ್ಯಾರ್ಥಿಗಳು ಪ್ರತ್ಯೇಕ ನಿವಾಸಗಳನ್ನು ಏರ್ಪಡಿಸಿಕೊಳ್ಳುತ್ತಿದ್ದಿರಬಹುದು. ಎಂದರೆ ಮೊದಮೊದಲು ತಕ್ಷಶಿಲೆ ಅನೇಕ ಗುರುಕುಲಗಳ ಸಮೂಹವಾಗಿತ್ತು. ಕ್ರಿ.ಪೂ. ಆರನೆಯ ಶತಮಾನದ ವೇಳೆಗೆ ಅದು ಒಂದು ಖ್ಯಾತಿವೆತ್ತ ವಿದ್ಯಾಕೇಂದ್ರವಾಯಿತು. ಅಲ್ಲಿಗೆ ಆಗ ವಾಹನ ಸೌಕರ್ಯಗಳಾಗಲಿ ಮಾರ್ಗ ಸೌಲಭ್ಯಗಳಾಗಲಿ ಇರದಿದ್ದರೂ ಉಜ್ಜಯಿನಿ ಮುಂತಾದ ದೂರದ ಊರುಗಳಿಂದ ವಿದ್ಯಾರ್ಥಿಗಳು ಬಂದು ಅಧ್ಯಯನ ಮಾಡುತ್ತಿದ್ದುದೇ ಇದಕ್ಕೆ ಸಾಕ್ಷಿಯಂತಿದೆ. ಕೋಸಲ, ಕಾಶಿ ಮುಂತಾದ ರಾಜಮನೆತನಗಳೂ ತಮ್ಮ ಮಕ್ಕಳಿಗೆ ಇಲ್ಲಿ ಜಾತಕ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದು ಸಂಪ್ರದಾಯವಾಗಿ ಹೋಗಿತ್ತು. ಬಿಲ್ಲುವಿದ್ಯೆಯಲ್ಲೂ ಅಲ್ಲಿ ಸಿಗುತ್ತಿದ್ದ ಶಿಕ್ಷಣ ರಾಜಮನೆತನಗಳಿಗೆ ಪ್ರಿಯವೆನಿಸಿತ್ತು. ಬಿಂಬಸಾರನ ಪುತ್ರ ಜೀವಿತ ಏಳುವರ್ಷಗಳ ತನಕ ವೈದ್ಯ ವಿದ್ಯೆಯನ್ನು ಇಲ್ಲಿ ಅಧ್ಯಯನ ಮಾಡಿದನಂತೆ. ವ್ಯಾಕರಣಶಾಸ್ತ್ರದ ಕರ್ತೃವಾದ ಪಾಣಿನಿಯೂ ಇಲ್ಲೆ ಅಧ್ಯಯನ ಮಾಡಿರಬೇಕೆಂದು ಊಹಿಸಿರುವರು. ತಕ್ಷಶಿಲೆಯಲ್ಲಿ ಕಲಾಶಾಸ್ತ್ರ, ವಿe್ಞÁನ ಮತ್ತು ವೃತ್ತಿವಿದ್ಯೆ-ಈ ಎಲ್ಲ ಮುಖಗಳ ಶಿಕ್ಷಣಕ್ಕೂ ಅವಕಾಶವಿತ್ತು. ವಿದ್ಯಾರ್ಥಿಗಳು ತಮ್ಮ 16-17ನೆಯ ವಯಸ್ಸಿನಲ್ಲಿ ಇಲ್ಲಿಗೆ ಬಂದು ಶಿಕ್ಷಣವನ್ನು ಆರಂಭಿಸುತ್ತಿದ್ದರು. ಅನಂತರ 6-8 ವರ್ಷಗಳ ತನಕ ವಿದ್ಯಾಭ್ಯಾಸ ಮಾಡುತ್ತಿದ್ದರು. ವಿದ್ಯಾರ್ಥಿಗಳಲ್ಲಾಗಲಿ, ಅಧ್ಯಾಪಕರಲ್ಲಾಗಲಿ ಆಗ ಜಾತಿಭೇದವಿದ್ದಂತೆ ತೋರುವುದಿಲ್ಲ. ಬಹುಶಃ ಜಾತಿಪದ್ಧತಿ ಅಂದು ಅಷ್ಟಾಗಿ ಬಲಗೊಂಡಿರಲಿಲ್ಲ. ಒಬ್ಬ ಗುರುಗಳ ಬಳಿ ಬ್ರಾಹ್ಮಣರಂತೆ ಕ್ಷತ್ರಿಯರೂ ವೈಶ್ಯರೂ ಇತರರೂ ಅಧ್ಯಯನ ಮಾಡುತ್ತಿದ್ದರು. ಬ್ರಾಹ್ಮಣ ವಿದ್ಯಾರ್ಥಿಗಳೂ ಬಿಲ್ಲುವಿದ್ಯೆಯನ್ನು ಅಭ್ಯಸಿಸುತ್ತಿದ್ದ ಅಂಶ ಕೆಲವು ಜಾತಕಗಳಲ್ಲಿ ಉಲ್ಲೇಖಗೊಂಡಿದೆ (ಶರಭಂಗಜಾತಕ). ಧನುರ್ವೇದಸಂಹಿತೆಯಲ್ಲಿ ಬ್ರಾಹ್ಮಣ ಅಥವಾ ಕ್ಷತ್ರಿಯ ಜಾತಿಯ ಗುರುಗಳು ಸೈನಿಕ ಶಿಕ್ಷಣವೀಯಬೇಕೆಂದು ಸೂಚಿಸಿದೆ. ಕ್ಷತ್ರಿಯರಾದ ಕೌರವರಿಗೆ ಬ್ರಾಹ್ಮಣರೆನಿಸಿದ ದ್ರೋಣಾಚಾರ್ಯರು ಗುರುಗಳಾಗಿದ್ದರು. ಸ್ಮøತಿಗಳು ಕೂಡ ಬ್ರಾಹ್ಮಣರೂ ಆಗ ಎಲ್ಲ ವೃತ್ತಿಗಳನ್ನೂ ಅನುಸರಿಸುತ್ತಿದ್ದ ಅಂಶವನ್ನು ಸೂಚಿಸುತ್ತವೆ. ಆದ್ದರಿಂದ ಜಾತಿ ಪದ್ಧತಿ ವೃತ್ತಿಗಳ ಆಧಾರವನ್ನು ಇನ್ನೂ ಅನುಸರಿಸಿರಲಿಲ್ಲ. ಯಾವ ವಿದ್ಯಾರ್ಥಿಯೇ ಆಗಲಿ ತನಗೆ ಆಸಕ್ತಿಯಿರುವ ವೃತ್ತಿಯನ್ನು ಕಲಿಯುವ ಅವಕಾಶವಿತ್ತೆಂಬ ಅಂಶ ಈ ಎಲ್ಲ ಆಧಾರಗಳಿಂದ ದೃಢಪಡುತ್ತದೆ. ವಿದ್ಯಾರ್ಥಿಗಳು ತಾವು ಸೇರುವಾಗ ಅಥವಾ ಬಿಡುವಾಗ ಯಾವ ಗುರುದಕ್ಷಿಣೆಯನ್ನೂ ಕೊಡುತ್ತಿರಲಿಲ್ಲವೆಂದು ತೋರುತ್ತದೆ. ಅದಕ್ಕೆ ಬದಲು ಗುರುಗಳಿಗೆ ಅಗತ್ಯವಾದ ಸೇವಾಕಾರ್ಯಗಳನ್ನು ಮಾಡಿಕೊಡುತ್ತಿದ್ದಿರಬೇಕು. ಹಗಲು ಅವರಿಂದ ಬೇಕಾದ ಕೆಲಸ ಮಾಡಿಸಿಕೊಂಡು ಸಂಜೆ ಮತ್ತು ರಾತ್ರಿಯ ವೇಳೆ ಗುರುಗಳು ಅವರಿಗೆ ಪಾಠ ಹೇಳುತ್ತಿದ್ದರು.

ಪಠ್ಯ ವಿಷಯಗಳು : ತಕ್ಷಶಿಲೆಯಲ್ಲಿ ಮೂರು ವೇದಗಳನ್ನೂ ಹದಿನೆಂಟು ಶಾಸ್ತ್ರಗಳನ್ನೂ ವೃತ್ತಿಕಲೆಗಳನ್ನೂ ಬೋಧಿಸುತ್ತಿದ್ದ ಅಂಶವನ್ನು ಜಾತಕಗಳು ಸೂಚಿಸುತ್ತವೆ. ವೃತ್ತಿ ಕಲೆಗಳಲ್ಲಿ ವೈದ್ಯ, ಶಸ್ತ್ರಚಿಕಿತ್ಸೆ, ಬಿಲ್ಲುವಿದ್ಯೆ, ಯುದ್ಧ ಕಾರ್ಯಾಚರಣೆ, ಖಗೋಳಶಾಸ್ತ್ರ, ಜೋತಿಷ್ಯ, ಲೆಕ್ಕವಿಡುವಿಕೆ, ವ್ಯವಸಾಯ, ದೇವತಾಶಾಸ್ತ್ರ, ಸರ್ಪವಿದ್ಯೆ, ಮಂತ್ರಗಾರಿಕೆ-ಇವು ಮುಖ್ಯವಾದುವು. ತತ್ತ್ವಶಾಸ್ತ್ರ ಆದಿಯಿಂದಲೂ ಪ್ರಖ್ಯಾತವಾಗಿದ್ದಿತಲ್ಲದೆ ವೇದಗಳ ಜೊತೆಗೆ ವೇದಾಂತವನ್ನೂ ಬೋಧಿಸಲಾಗುತ್ತಿತ್ತು.

ತಕ್ಷಶಿಲೆಯ ಖ್ಯಾತಿ ಮೌರ್ಯರ ಕಾಲಕ್ಕೆ ಇಳಿಮುಖವಾಗುತ್ತ ಬಂದಿತು. ಹಾಗೂ ಹೀಗೂ ಅದು ಕ್ರಿ.ಶ. 250ರವರೆಗೂ ಉಳಿದುಕೊಂಡು ಬಂತಾದರೂ ಕುಶಾನರ ಅನಂತರ ಅಲ್ಲಿ ಅಧಿಕಾರಕ್ಕೆ ಬಂದ ಧೂರ್ತ ರಾಜಮನೆತನಗಳ ಹಿಡಿತಕ್ಕೆ ಸಿಕ್ಕಿ ಅಲ್ಲಿನ ಶಿಕ್ಷಣ ಸೌಲಭ್ಯಗಳು ಮಾಯವಾಗಹತ್ತಿದುವು. 5ನೆಯ ಶತಮಾನದ ವೇಳೆಗೆ ಅಲ್ಲಿ ಅಂಥ ಶಿಕ್ಷಣ ಸೌಲಭ್ಯಗಳಾವುವೂ ಉಳಿಯದಾದುವು. ಫಾಹಿಯಾನ್ ಆಗ ಭಾರತದಲ್ಲಿ ಸಂಚರಿಸಿ ಇಲ್ಲಿನ ಪ್ರಮುಖ ಶಿಕ್ಷಣ ಕೇಂದ್ರಗಳ ಬಗ್ಗೆ ವಿವರ ನೀಡುವಾಗ ತಕ್ಷಶಿಲೆಯ ಹೆಸರನ್ನು ಉಲ್ಲೇಖಿಸಿಲ್ಲ. ಆ ಶತಮಾನದ ಕೊನೆಕೊನೆಗೆ ಆರಂಭವಾದ ಹೂಣರ ದಾಳಿಗೆ ಸಿಕ್ಕಿದ್ದರಿಂದ ಅಲ್ಲಿ ಉಳಿದಿದ್ದ ಅಷ್ಟಿಷ್ಟು ಶಿಕ್ಷಣ ಸೌಲಭ್ಯಗಳೂ ನಾಶವಾಗಿ ಹೋಗಿದ್ದವು. ಹ್ಯುಯೆನ್‍ತ್ಸಾಂಗ್ 7ನೆಯ ಶತಮಾನದಲ್ಲಿ ಭಾರತಪ್ರವಾಸವನ್ನು ಕೈಗೊಂಡ ಕಾಲಕ್ಕೆ ಅಲ್ಲಿ ಯಾವ ಸೌಲಭ್ಯವೂ ಉಳಿದಿರಲಿಲ್ಲ. ಸೌತ್ರಾಂತಿಕದ ಕರ್ತೃವಾದ ಕುಮಾರಲಬ್ಧನ ಮಠವೂ ಪಾಳು ಬಿದ್ದಿತ್ತು. ಅಲ್ಲಿ ಸ್ಥಾಪನೆಯಾಗಿದ್ದ ಅನೇಕ ಇತರ ಬೌದ್ಧಮಠಗಳೂ ಹಾಳಾಗಿದ್ದವು. ಹೀಗೆ ಪ್ರಪಂಚದಲ್ಲಿ ನಾಗರಿಕತೆಯ ಅರುಣೋದಯದಲ್ಲಿ ರೂಪುಗೊಂಡು ಸುಮಾರು ಹದಿನಾಲ್ಕು ಶತಮಾನಗಳವರೆಗೆ ನಡೆದು ಬಂದ ಈ ವಿದ್ಯಾಕೇಂದ್ರ ಹೂಣರ ದಾಳಿಯಿಂದ ಅಂತಿಮವಾಗಿ ನಿರ್ನಾಮವಾಯಿತು.				(ಬಿ.ಸಿ.ಪಿ.; ಎಸ್.ವಿ.ಎಸ್.ಎಲ್.)

ಭೂಶೋಧನೆ: ತಕ್ಷಶಿಲೆಯಲ್ಲಿ ಭಾರತ ಪುರಾತತ್ವ ಸರ್ವೇಕ್ಷಣ ಇಲಾಖೆಯ ಮುಖ್ಯಾಧಿಕಾರಿ ಜಾನ್ ಮಾರ್ಷಲ್‍ನ ನಿರ್ದೇಶನದಲ್ಲಿ ಭೂಶೋಧನೆಗಳು 1819 ರಿಂದ 1934ರವರೆಗೆ ನಡೆದವು. ಈ ಭೂಶೋಧನೆಗಳ ಫಲವಾಗಿ ತಕ್ಷಶಿಲೆಯ ಇತಿಹಾಸವನ್ನು ಕ್ರಿ.ಪೂ. 7ನೆಯ ಶತಮಾನದವರೆಗೂ ಕೊಂಡೊಯ್ಯಬಹುದಾಗಿದೆ.

ಮಾರ್ಷಲ್‍ನ ಭೂಶೋಧನೆಗಳಿಂದ ಅಲ್ಲಿ ಮೂರು ಪ್ರಾಚೀನ ನಗರಗಳ ಹಾಳು ನೆಲೆಗಳು ಬೆಳಕಿಗೆ ಬಂದಿವೆ. ಅವುಗಳಲ್ಲಿ ಅತ್ಯಂತ ಪ್ರಾಚಿನವಾದ ಭೀರ್ ನೆಲೆ ಕ್ರಿ.ಪೂ. 518 ರಲ್ಲಿ ಡೇರಿಯಸ್ ಈ ಪ್ರದೇಶವನ್ನು ಗೆಲ್ಲುವ ಸಮಯಕ್ಕೆ ಮೊದಲೇ ಅಸ್ತಿತ್ವಕ್ಕೆ ಬಂದಿತ್ತು. ಕ್ರಮೇಣ ದೊಡ್ಡ ನಗರವಾಗಿ ಬೆಳೆದು ಪರ್ಷಿಯ ಸಾಮ್ರಾಜ್ಯದ 20 ನೆಯ ಸತ್ರಪಿಯ (ಪ್ರಾಂತ್ಯ) ಮುಖ್ಯನಗರವಾಗಿತ್ತು. ಕ್ರಿ.ಪೂ. 2ನೆಯ ಶತಮಾನದ ಆದಿಭಾಗದಲ್ಲಿ ಬ್ಯಾಕ್ಟ್ರಿಯದ ಗ್ರೀಕರು ಭಾರತದ ವಾಯುವ್ಯ ಭಾಗಗಳನ್ನು ಆಕ್ರಮಿಸಿದಾಗ, ಅವ್ಯವಸ್ಥಿತವಾಗಿ ಬೆಳೆದಿದ್ದ ಭೀರ್ ನಗರ ತಮ್ಮ ರಾಜಧಾನಿಗೆ ಯೋಗ್ಯವಾಗಿಲ್ಲವೆಂದು ತಮ್ಮ ಸುಧಾರಿತ ನಗರ ಯೋಜನೆಗನುಗುಣವಾಗಿ ತಾಮ್ರನಾಲೆಯ ದಡದಲ್ಲಿ ಸರ್ಕಾಪ್ ನಗರವನ್ನು ಸ್ಥಾಪಿಸಿದರು. ನೇರವಾದ ಅಗಲವಾದ ರಸ್ತೆಗಳುಳ್ಳ, ಚೌಕಟ್ಟಿನ ತಳಹದಿಯುಳ್ಳ ಈ ನಗರ ಗ್ರೀಕರ ವಾಸ್ತುಯೋಜನೆಗನುಗುಣವಾಗಿ ನಿರ್ಮಿತವಾಗಿದೆ. ಉತ್ಖನನಗಳಲ್ಲಿ ಆ ಕಾಲದ ಅರಮನೆ, ಗ್ರೀಕ್ ಧಾರ್ಮಿಕ ಮಂದಿರಗಳು ಮತ್ತು ಸಾರ್ವಜನಿಕ ಕಟ್ಟಡಗಳ ಅವಶೇಷಗಳಲ್ಲದೆ ಜನಸಾಮಾನ್ಯರ ವಸತಿಗಳ ಅವಶೇಷಗಳೂ ಕಂಡುಬಂದಿವೆ. ನಗರದ ಸುತ್ತ ಸುಭದ್ರವಾದ 15ರಿಂದ 21 1/2 ಅಡಿ ಅಗಲವಾದ ಕಲ್ಲಿನ ಕೋಟೆಗೋಡೆ, ಕಂದಕಗಳಿವೆ. ಕೋಟೆ ಗೋಡೆಯ ಹೊರ ಭಾಗದಲ್ಲಿ ಅಲ್ಲಲ್ಲ್ಲಿ ಚಚ್ಚೌಕನಾದ ಬುರುಜಗಳನ್ನು ಕಲ್ಲಿನಲ್ಲಿ ನಿರ್ಮಿಸಲಾಗಿದೆ. ಕೋಟೆಯ ಒಳಭಾಗದಲ್ಲಿ ಹಥಿಯಾಲ್ ಬೆಟ್ಟಸರಣಿಯ ಮೂರು ಶಿಖರಗಳೂ ಪ್ರತ್ಯೇಕವಾದ ಮತ್ತೊಂದು ಗುಡ್ಡವೂ ಇವೆ. ಈ ಪ್ರತ್ಯೇಕ ಗುಡ್ಡದ ಮೇಲೆ ಅರಮನೆ, ಸಾರ್ವಜನಿಕ ಕಟ್ಟಡಗಳಿದ್ದ ನಗರದ ಕೇಂದ್ರ ಪ್ರವೇಶವಿದ್ದಿರಬಹುದು. ಬೆಟ್ಟದ ಸರಣಿಯ ನಡುವಣ ಕಣಿವೆಯಲ್ಲಿ ಕೋಟೆಯ ಮಹಾದ್ವಾರವಿತ್ತು. ಸರ್ಕಾಪ್ ನಗರದ ರಸ್ತೆಗಳ ಬದಿಗಳಲ್ಲಿ ಇರುವ ದೊಡ್ಡ ತೆರೆದ ಚರಂಡಿ, ಮನೆಗಳ ಚರಣವ್ಯವಸ್ಥೆ ಅಲ್ಲಲ್ಲಿ ಕಾಣುವ ಬಾವಿಗಳು-ಇವೆಲ್ಲ ನಗರ ನೈರ್ಮಲ್ಯದ ಬಗ್ಗೆ ಅಂದು ಇದ್ದ ವ್ಯವಸ್ಥೆಯನ್ನು ಸೂಚಿಸುತ್ತವೆ. ನಗರದ ಹೊರಭಾಗದಲ್ಲಿ ಬಡಜನರ ಕಾರ್ಮಿಕರ ವಸತಿಗಳೂ ಗ್ರೀಕ್ ದೇವತೆಯೊಂದರ ಮಂದಿರವೂ ಇದ್ದುವು.

ಬ್ಯಾಕ್ಟ್ರಿಯದ ಗ್ರೀಕರು, ಶಕರು, ಮತ್ತು ಪಾರ್ತಿಯನರ ಕಾಲಗಳಲ್ಲಿ ಈ ನಗರ ರಾಜಧಾನಿಯಾಗಿ, ಮುಂದುವರಿದರೂ ಬಹುಶಃ ಮೊದಲನೆಯ ಕನಿಷ್ಕನ ಕಾಲದಲ್ಲಿ ಹೊಸ ರಾಜಧಾನಿಯಾದ ಸರ್‍ಸುಖ್ ನಗರವನ್ನು ಸರ್ಕಾಪ್ ನಗರದ ಈಶಾನ್ಯದಲ್ಲಿ ನಿರ್ಮಿಸಲಾಯಿತು. ಚಚ್ಚೌಕವಾದ ಪ್ರದೇಶಗಳನ್ನೊಳಗೊಂಡ ಈ ನಗರದ ಸುತ್ತಳತೆ ಮೂರು ಮೈಲಿಗಳಷ್ಟಿತ್ತು. ಕೋಟೆ ಗೋಡೆಯ ಅಗಲ 18 ಅಡಿಗಳಿದ್ದು ಅದನ್ನು ಕಲ್ಲಿನಲ್ಲಿ ಕಟ್ಟಲಾಗಿತ್ತು. ಬುರುಜಗಳು ವೃತ್ತಾಕಾರವಾಗಿದ್ದುವು. ಅವನ್ನು 90 ಅಡಿಗಳ ಅಂತರದಲ್ಲಿ ಕಟ್ಟಲಾಗಿತ್ತು. ಕೋಟೆಯ ಒಳಬಾಗದಲ್ಲಿ ಈಗ ಮೂರು ಗ್ರಾಮಗಳಿರುವುದರಿಂದ ಅಲ್ಲಿರುವ ಅವಶೇಷಗಳನ್ನು ಶೋಧಿಸಲಾಗಿಲ್ಲ. ಸರ್‍ಸುಖ್ 7-8ನೆಯ ಶತಮಾನಗಳಲ್ಲಿ ಕುಶಾನ ಮತ್ತು ಕಿದಾರ ಕುಶಾನ ರಾಜ್ಯಗಳು ನಾಶವಾಗುವವರೆಗೂ ರಾಜಧಾನಿ ಆಗಿತ್ತು.

	ಮಾರ್ಷಲ್‍ನ ಭೂಶೋಧನೆಗಳಿಂದ ತಕ್ಷಶಿಲೆಯ ಈ ಮೂರು ಪ್ರಾಚೀನ ನಗರ ನೆಲೆಗಳಲ್ಲದೆ, ನಗರಗಳ ಹೊರವಲಯದಲ್ಲಿ ಗುಡ್ಡ ಕಣಿವೆಗಳ ಪ್ರದೇಶದಲ್ಲಿದ್ದ ನೂರಾರು ಬೌದ್ಧ ಸ್ತೂಪ, ವಿಹಾರಗಳ, ಅವಶೇಷಗಳು ಬೆಳಕಿಗೆ ಬಂದಿವೆ. ಕಣಿವೆಯ ದಕ್ಷಿಣ ಭಾಗದಲ್ಲಿ ಹಲವಾರು ಪ್ರತ್ಯೇಕವಾದ ಎತ್ತರದ ಗುಡ್ಡಗಳಿವೆ. ಅವುಗಳ ಶಿಖರ ಪ್ರದೇಶಗಳಲ್ಲಿ ಸುತ್ತಲ ಪ್ರಕೃತಿ ಸೌಂದರ್ಯದ ನಡುವೆ ಈ ಬೌದ್ಧ ನಿರ್ಮಾಣಗಳನ್ನು ರಚಿಸಲಾಗಿದೆ.

ಅವುಗಳಲ್ಲಿ ಅತ್ಯಂತ ದೊಡ್ಡದು ಹಾಗೂ ಮುಖ್ಯವಾದುದು ಧರ್ಮರಾಜಿಕ ಸ್ತೂಪ. ತಾಮ್ರನಾಲೆಯ ದಡದಲ್ಲಿ ಎತ್ತರದ ಮೈದಾನದಲ್ಲಿದೆ. ಮೊದಲಿಗೆ ಅಶೋಕನ ಕಾಲದಲ್ಲಿ ಕಟ್ಟಲಾಗಿದ್ದು ಮತ್ತೆ ಕುಶಾನರ ಕಾಲದಲ್ಲಿ ವಿಸ್ತಾರವಾಗಿ ಪುನರ್ರಚಿತವಾಗಿದೆ. ಎತ್ತರವಾದ ಜಗಲಿಯ ಮೇಲೆ ವೃತ್ತಾಕಾರದ ಸ್ತೂಪವನ್ನು ಕಟ್ಟಲಾಗಿದೆ. ಹೊರಗೋಡೆಯ ಮೇಲಿರುವ ಉಬ್ಬುತಗ್ಗುಗಳು. ಗೂಡುಗಳು, ಬುದ್ಧ, ಬೋಧಿಸತ್ವ ಮತ್ತಿತರ ಬೌದ್ಧ ದೇವತೆಗಳ ಉಬ್ಬು ಚಿತ್ರಗಳು ಕಟ್ಟಡದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಅಲಂಕರಣಗಳು ಕಾಲಕ್ರಮದಲ್ಲಿ ಮಾಡಿದರೆಂಬ ಅಂಶ ಅಲ್ಲಿ 4-5ನೆಯ ಶತಮಾನಗಳಲ್ಲಿ ನಿರ್ಮಿಸಿದ ಸ್ತೂಪಗಳ ಮೇಲಿನ ಅಲಂಕರಣಗಳಿಂದ ವ್ಯಕ್ತವಾಗುತ್ತವೆ.

ಮುಖ್ಯ ಸ್ತೂಪದ ಸುತ್ತ ಹಲವಾರು ಸಣ್ಣಪುಟ್ಟ ಸ್ತೂಪಗಳನ್ನು ವಿವಿಧ ಕಾಲಗಳಲ್ಲಿ ನಿರ್ಮಿಸಲಾಗಿದೆ. ಮುಖ್ಯ ಸ್ತೂಪದ ಸುತ್ತಲ ಪ್ರದಕ್ಷಿಣ ಪಥದಂಚಿನಲ್ಲಿ ಅನೇಕ ಸಣ್ಣ ಗುಡಿಗಳನ್ನು ಕಟ್ಟಲಾಗಿದೆ. ಈ ಗುಡಿಗಳಲ್ಲಿ ಅಲ್ಲಿ ವಾಸಿಸಿ ನಿರ್ವಾಣ ಪಡೆದ ಪ್ರಮುಖ ಬೌದ್ಧ ಸಂನ್ಯಾಸಿಗಳ ಸ್ಮಾರಕ ಸ್ತೂಪಗಳಿವೆ. ಹೊರವಲಯದಲ್ಲಿ ಮತ್ತೆ ಕೆಲವು ಕಾಲ ವಿಶಾಲ ಗುಡಿಗಳನ್ನು ಕಟ್ಟಲಾಗಿದೆ. ಅವುಗಳಲ್ಲಿ ನೈಋತ್ಯ ಮೂಲೆಯಲ್ಲಿರುವ ಗಜಪೃಷ್ಠಾಕೃತಿಯ ಗುಡಿ ಗಮನಾರ್ಹ.

ಧರ್ಮರಾಜಿಕ ಸ್ತೂಪದ ಆಗ್ನೇಯದಲ್ಲಿ ಮತ್ತು ಕೆಲವು ಸಣ್ಣ ಸ್ತೂಪಗಳಿವೆ. ಅವನ್ನು ದಾಟಿ ಮುಂದೆ ನಡೆದರೆ ಅಶೋಕನ ಮಗ ಕುನಾಲನ ಸ್ಮರಣಾರ್ಥವಾಗಿ ಕಟ್ಟಿಸಲಾಯಿತೆಂದು ಹೇಳಲಾದ ಕುನಾಲ ಸ್ತೂಪವಿದೆ. ಸರ್‍ಕಾಪ್ ನಗರವನ್ನು ದಾಟಿದರೆ ಚಾಂಡಿಯಾಲ್ ಮಂದಿರ ಬರುತ್ತದೆ. ಗ್ರೀಕ್ ದೇವಾಲಯಗಳ ಶೈಲಿಯ ಈ ಕಟ್ಟಡವನ್ನು ಬಹುಶಃ ಜರತುಷ್ಟ್ರ ಪಂಥದ ಮಂದಿರವೆಂದು ಮಾರ್ಷಲ್ ಅಭಿಪ್ರಾಯಪಟ್ಟಿದ್ದಾನೆ. ಮುಂದೆ ಕೆಲವು ಸ್ತೂಪ, ವಿಹಾರಗಳ ಅನಂತರ ಸರ್‍ಸುಖ್ ನಗರ ನೆಲೆಮುಗಿದು ಲಾಲ್‍ಚಕ್ ಮತ್ತು ಭಲ್ಲರ್ ಸ್ತೂಪಗಳು ಬರುತ್ತವೆ. ಇವಲ್ಲದೆ ತಕ್ಷಶಿಲೆಯಲ್ಲಿರುವ ಮೊಹ್ರಮೊರಾಡು, ಪಿಪ್ಟಲಾ ಮತ್ತು ಜಾಲಿಯಾನ್ ಸ್ತೂಪಗಳು ವಿಹಾರಗಳು ಅಲ್ಲಿಯ ಬೌದ್ಧ ನಿರ್ಮಾಣಗಳ ಉತ್ತಮ ನಿದರ್ಶನಗಳಾಗಿದ್ದು ಉತ್ತಮಸ್ಥಿತಿಯಲ್ಲಿ ಉಳಿದು ಬಂದಿದೆ. ಜಾಲಿಯಾನ್ ಸ್ತೂಪ ಮತ್ತು ಅದಕ್ಕೆ ಸೇರಿದ ವಿಹಾರಗಳು ಈ ಪ್ರದೇಶದ ಬೌದ್ಧ ನಿರ್ಮಾಣಗಳ ಉತ್ತಮ ಮಾದರಿಯೆಂದು ಪರಿಗಣಿಸಲಾಗಿದೆ.
(ಬಿ.ಕೆ.ಜಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ